ಎಲಬು 
	
ಮಾನವನ ಆಕೃತಿಗೆ ಮೂಲ ಆಧಾರ ಮೂಳೆಗಳು. ಗಟ್ಟಿಯಾಗಿರುವ, ಸುಣ್ಣದಾಂಶದೊಂದಿಗೆ ಖನಿಜೀಕೃತಗೊಂಡ ವಿಶೇಷ ಹಾಗೂ ವಿಶಿಷ್ಠವಾದ ಊತಕ (ಟಿಷ್ಸೂ) ವೆ ಎಲಬು. ಶರೀರದ ಎಲ್ಲ ಎಲುಬುಗಳು ಸೇರಿ ಎಲುಗಟ್ಟು ರಚನೆಗೊಂಡಿದೆ. (ಚಿತ್ರ - 1) ಎರಡು ಎಲುಬುಗಳು ಸೇರುವಲ್ಲಿ ಕೀಲು ಇರುತ್ತದೆ. ಕೀಲಿನ ಚಲನೆಯಿಂದಾಗಿ ಕೂಡಲು, ಏಳಲು, ನಡೆಯಲು, ಹಿಡಿಯಲು ಹೀಗೆ ನಾನಾ ಕಾರ್ಯಗಳು ಸಾಧ್ಯವಾಗುತ್ತವೆ. ಎಲುಬಿಗೆ ಸ್ನಾಯುಗಳು, ಕಂಡರಗಳು, ಹುರಿಗಳು ಅಂಟಿಕೊಂಡಿದ್ದು ಕೀಲು ಚಲನೆಗೆ ಆಧಾರವಾಗಿವೆ. ಶರೀರದೊಳಗಿನ ಎಲುಬುಗಳೆಲ್ಲ ಒಂದಕ್ಕೊಂದು ಹೊಂದಿಕೊಂಡು ಮೈಕಟ್ಟಿನ ರೂಪ ರಚಿಸುತ್ತವೆ. ರಕ್ತ ತಯಾರಿಸುವ ಊತಕ ಎಲುಮಜ್ಜೆ (ಬೋನ್ ಮ್ಯಾರೊ) ಮೂಳೆಗಳ ಒಳ ಪೊಳ್ಳಿನಲ್ಲಿದೆ. ದೇಹದ ಜೀವಾಳದ ಅಂಗಗಳಾದ ಹೃದಯ ಪುಪ್ಪುಸ, ಮಿದುಳು ಬೆನ್ನುಹುರಿಗಳು ಮೂಳೆಯ ಕವಚದಿಂದ ಸುರಕ್ಷಿತವಾಗಿವೆ.

ಮೆತುವಾದ ಜೈವಿಕ ಹಾಸಿಗೆ (ಮ್ಯಾಟ್ರಿಕ್ಸ್)ಯೊಳಗೆ ಮುಖ್ಯವಾಗಿ ಕ್ಯಾಲ್ಸಿಯಂ ಫಾಸ್ಪೇಟ್, ಕಾರ್ಬೊನೇಟುಗಳಿರುವ ಸಮ್ಮಿಶ್ರ ಖನಿಜ ಸೇರಿಕೊಂಡು ಎಲುಬು ಬಿರುಸಾಗಿರಲಿಕ್ಕೆ ಕಾರಣವಾಗುತ್ತದೆ. ಬದುಕಿರುವ ಮೂಳೆಯಲ್ಲಿ ಜೀವವಿರುವುದರಿಂದ ಅವುಗಳಲ್ಲಿ ರಕ್ತ ನಾಳಗಳು, ಹಾಲರಸ ನಾಳಗಳು ಮತ್ತು ನರಗಳು ಇರುತ್ತವೆ. 

ರಚನೆ : ಎಲುಬಿನಲ್ಲಿ ಮುಖ್ಯವಾಗಿ ಎರಡು ಭಾಗಗಳು. ಕವಚರೂಪದ ಹೊರ ಭಾಗ ದಪ್ಪವಾಗಿ ಗಟ್ಟಿಯಾಗಿದ್ದು ಅದಕ್ಕೆ “ರಗಟೆಲುಬು” (ಕಾರ್ಟೆಕ್ಸ್) ಎನ್ನುತ್ತಾರೆ ಇದರ ಒಳ ಭಾಗದಲ್ಲಿ ಸ್ಪಂಜಿನಂತೆ ಸಡಿಲು ಸಡಿಲಾಗಿ ಎಲುವಿನೆಳೆಗಳು ಹರಡಿಕೊಂಡಿದ್ದು ಹಂದರೆಲುಬು (ಕ್ಯಾನ್ಸಲಸ್ ಬೋನ್) ಎನಿಸಿಕೊಳ್ಳುತ್ತದೆ. ರಗಟೆಲುಬನ್ನು ಒಂದು ತೆಳುವಾದ ಪೊರೆ ಸುತ್ತಿಕೊಂಡಿರುತ್ತದೆ ಇದಕ್ಕೆ ಎಲುಸುತ್ಪರೆ ಎನ್ನುತ್ತಾರೆ. ಹಂದರೆಲುವಿನ ಎಲುದೂಲ (ಲ್ಯಾಮೆಲ್ಲೆ) ಗಳು ಅಡ್ಡಾದಿಡ್ಡಿಯಾಗಿ ಹರಡಿಕೊಂಡಿದ್ದರೂ ಭಾರ, ಒತ್ತಡ ಬೀಳುವಲ್ಲಿ ದಟ್ಟವಾಗಿರುತ್ತವೆ. 

	
ರಗಟೆಲುಬಿನಲ್ಲಿ ಹ್ಯಾವರ್ಸಿಯನ್ ಮಂಡಲವಿದೆ. ಹ್ಯಾವರ್ಸಿಯನ್ ಇಲ್ಲವೆ ಎಲುಉರುಳೆ (ಆಸ್ಪಿಯೋನ್) ಮೂಳೆ ರಚನೆಯಲ್ಲಿ ಒಂದು ಘಟಕ. ಸಾಮಾನ್ಯವಾಗಿ ಇವು ಎಲುಬಿನಲ್ಲಿ ಉದ್ದುದ್ದವಾಗಿ ಉರುಳೆಯಾಕಾರವಾಗಿ, ಕವಲೊಡೆದು, ಕಿರುಗಾತ್ರದ ಒಂದು ಅಥವಾ ಹೆಚ್ಚಿನ ಸಣ್ಣ ರಕ್ತ ನಾಳಗಳನ್ನು ಸಾಗಿಸುವ ಇಕ್ಕಟ್ಟಿನ ಚಿಕ್ಕಕಾಲುವೆ ಹೊಂದಿರುತ್ತದೆ. ಎಲು ಉರುಳೆಗಳ ಗೋಡೆಗಳು ಸುರಳಿಸುತ್ತುವ ಪದರಗಳಂತಿರುತ್ತವೆ. ಈ ಘಟಕಕ್ಕೆ ಮೂಲ ಆಧಾರ ತಂತುಕ ಪ್ರೋಟಿನಾದ ಅಂಟುಜನಕ (ಕೊಲ್ಲೇಜನ). ಮೂಳೆಯ ತೂಕದ ತೊಂಬತ್ತು ಪ್ರತಿ ಶತಕ್ಕೂ ಹೆಚ್ಚಿನ ಭಾಗ ಅಂಟುಜನಕದ್ದಾಗಿದೆ.
	
ಅಡ್ಡ ಕೊಯ್ದ ಎಲುಬಿನ ರಚನೆಯನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಹ್ಯಾವರ್ಸಿಯನ್ ಘಟಕ ಅತ್ಯಂತ ಶಿಸ್ತಿನ ಅಂದದ ಚಿತ್ರವಾಗಿ ಕಾಣಿಸುತ್ತದೆ. (ಚಿತ್ರ - 2) ಮಧ್ಯದಲ್ಲಿ ರಕ್ತನಾಳದ ರಂಧ್ರ, ಅದರ ಸುತ್ತಲೂ ಕಿಗ್ಗುಳಿ (ಲ್ಯಾಕುನೆ), ಅದಕ್ಕೆ ಹೊಂದಿಕೊಂಡು ರೇಕುಪರೆ (ಲ್ಯಾಮೆಲ್ಲೆ) ಗಳು ಚಕ್ರವ್ಯೂಹದಂತೆ ಹರಡಿಕೊಂಡಿರುತ್ತವೆ. ಕುಳಿಗಳಿಂದ ಅಡ್ಡವಾಗಿ ಸಾಗುವ ಕಿರುಗಾಲುವೆಗಳಿರುತ್ತವೆ. ಎಲುಗುಳಿಗಳಲ್ಲಿ ಎಲುಕಣಗಳು ನೆಲೆಸಿರುತ್ತವೆ. ಕಿರುಗಾಲುವೆಗಳು ರಕ್ತ ಸಂಚಾರದ ಮಾರ್ಗಗಳಾಗಿರುತ್ತವೆ. ಇಂತಹ ಘಟಕಗಳು ಅಂಟುಜನಕ ಪರದೆಯಿಂದಾವೃತಗೊಂಡಿದ್ದು ತನ್ನ ಸುತ್ತಲಿನ ಇತರ ಘಟಕಗಳೊಂದಿಗೆ ಅಡ್ಡರಕ್ತ ನಾಳಗಳಿಂದ ಸಂಪರ್ಕ ಸಾಧಿಸುತ್ತವೆ. ಹ್ಯಾವರ್ಸಿಯನ್ ನಾಳಗಳು ಹೀಗೆ ರಗಟೆಲುಬಿನ ಹೊರ ಮೈಗೆ ಮತ್ತು ಒಳ ಮೈಗೆ ಹಾದು ಹೋಗುತ್ತವೆ. 
ಎಲುಬು ಜೀವಕಣಗಳು : ಮೂಳೆಯ ಒಂದೊಂದು ಜೀವಕಣಗಳಿಗೆ ವಿಶಿಷ್ಟವಾದ ಬೇರೆ ಕಾರ್ಯ ನಿರ್ವಹಿಸುವ ಶಕ್ತಿ ಇರುತ್ತದೆ. ಎಲುಬಿನ ಹೊರ ಮೈ (ಸರ್ಫೇಸ್) ಯ ದಟ್ಟ ರಗಟೆಲುಬಿನಲ್ಲಿರುವ ಎಲುನನೆಕಣಗಳು (ಆಸ್ಟಿಯೋಬ್ಲಾಸ್ಟ್) ಮೂಳೆಯನ್ನು ರಚಿಸುತ್ತವೆ. ಈ ಕಣಗಳು ಎಲುಸುತ್ಪರೆಯ ಒಳ ಮೈಯಲ್ಲಿರುವದು ಕಂಡು ಬಂದಿದೆ. ಎಲುಕುಳಿ (ಲ್ಯಾಕುನೆ) ಗಳಲ್ಲಿರುವ ಎಲುಕಣಗಳು (ಆಸ್ಪಿಯೋಸೈಟ್ಸ್) ಎಲುಬನ್ನು ಬದುಕಿಸಿಡುತ್ತವೆ.  ಎಲುಸುತ್ಪರೆಯ ಒಳ ಭಾಗದಲ್ಲಿ ಹಾಗೂ ಹಂದರೆಲುಬಿನೊಳ ಮೈಯಲ್ಲಿ ಲುತವಕ (ಆಸ್ಟಿಯೋಕ್ಲಾಸ್ಟ್) ಗಳಿವೆ. ಇವು ಎಲುಬನ್ನು ಹಾಳುಗೆಡವಿ ಹೀರಿ ಕರಗಿಸುವ ಸಾಮಥ್ರ್ಯ ಪಡೆದಿವೆ. 
ಈ ಎಲ್ಲ ಜೀವಕಣಗಳು ಒಂದೆ ಮೂಲದಿಂದ ಹುಟ್ಟುವುದರಿಂದ ಒಂದಕ್ಕೊಂದು ಸಂಬಂಧಿಸಿವೆ. ಗಾಯದಿಂದಾಗಿ, ಪೆಟ್ಟಿನಿಂದಾಗಿ ಮುರಿದ ಎಲುಬು ಕೂಡಿಕೊಳ್ಳಲು ಹೊಸ ಎಲುಬಿನ ರಚನೆ ಬೇಕಾಗುತ್ತದೆ. ಎಲುಸುತ್ಪರೆಯ ಮತ್ತು ಎಲುಬೊಳು ಪೊರೆಯ ಜೀವಕಣಗಳಿಗೆ ಎಲುಬನ್ನು ತಯಾರಿಸುವ ಬಲವಿರುತ್ತದೆ. ಹೀಗಾಗಿ ಮುರಿದೆಲುಬು ನೈಸರ್ಗಿಕವಾಗಿ ಸರಿಹೊಂದಲು ಸಾಧ್ಯವಾಗುತ್ತದೆ. 

ಊತಕಾಂತರದ ವಸ್ತು : ಎಲುಬಿನಲ್ಲಿಯ ಜೀವಕಣಗಳನಡುವಿನ ಊತಕಾಂತರದ (ಇಂಟರ್‍ಸ್ಪಿಷಿಯಲ್) ಭಾಗವೆಲ್ಲ ಸುಣ್ಣ ಗೂಡಿದ ಅಂಟುಜನಕ ಪದಾರ್ಥವಾಗಿದೆ. ಮೂಳೆಯ ಗಡಸುತನಕ್ಕೆ ಇದೇ ಮುಖ್ಯ ಕಾರಣ. ಊತಕಾಂತರದಲ್ಲಿ ಜೈವಿಕ ಹಾಸಿಗೆ, ಅಜೈವಿಕ ಖನಿಜಗಳು ಮತ್ತು ನೀರು ಇರುತ್ತವೆ. ಜೈವಿಕ ಹಾಸಿಗೆಯಲ್ಲಿ ಪ್ರಮುಖವಾಗಿ ಅಂಟುಜನಕ ತಂತುಗಳು ಆಧಾರ ವಸ್ತುವಾಗಿರುತ್ತದೆ. ಇದನ್ನು ಎಲೆಕ್ಪ್ರಾನ ದರ್ಶಕದಲ್ಲಿ ದೊಡ್ಡದು ಮಾಡಿ ನೋಡಿದರೆ ಅಂಟುಜನಕತಂತುಗಳ ಉದ್ದಕ್ಕೂ ಜೋಡಿ ಅಡ್ಡ ಪಟ್ಟಿಗಳು ಕ್ರಮವಾಗಿರುವುದು ಕಾಣಿಸುತ್ತದೆ. ಈ ತಂತುಗಳ ನಡುವೆ ಖನಿಜದ ಹರಳುಗಳು ಮತ್ತು ಅರೆದ್ರವವಾದ ಗಚ್ಚು (ಸಿಮೆಂಟ್) ತುಂಬಿರುತ್ತವೆ.
	
ಎಲುಬಿನ ಲವಣಗಳಲ್ಲಿ ಮುಖ್ಯವಾದ್ದು ಕ್ಯಾಲ್ಸಿಯಂ ಫಾಸ್ಪೇಟ. ಇವು ಸರಳವಾಗಿ ಕರಗುವುದಿಲ್ಲ. ಇವು ಷಟ್‍ಮುಖಿಗಳಾಗಿರುತ್ತವೆ. ತಂತುಗಳ ನೇರ ದಿಕ್ಕಿನಲ್ಲಿ ಈ ಹರಳುಗಳು ಉದ್ದುದ್ದನಾಗಿ ಕ್ರಮವಾಗಿ ಜೋಡಿಸಿರುತ್ತವೆ. ಎಲುಬಿನ ಲವಣದ ಹರಳಿನ ರಸಾಯನಿಕ ರಚನೆಯು 3ಅಚಿ3 (Pಔ4)2 ಅಚಿ(ಔಊ)2 ಆಗಿದ್ದು ಇದಕ್ಕೆ ಹೈಡ್ರಾಕ್ಸಿ ಅಪಟೈಟ ಎನ್ನುತ್ತಾರೆ. ಎಲುಬು ಒಂದು ಗಟ್ಟಿಯಾದ (ಸಾಲಿಡ್) ವಸ್ತುವಾಗಿರದೆ ಇಟ್ಟಿಗೆ, ಗಾರೆಗಳಿಂದ ರಚನೆಗೊಂಡಂತಿದೆ. ಹೈಡ್ರಾಕ್ಸಿ ಅಪಟೈಟಿನ ಹರಳುಗಳು ಇಟ್ಟಿಗೆಗಳಾದರೆ, ಸಿಟ್ರೇಟು, ಕಾರ್ಬೋನೇಟುಗಳು ಗಾರೆ: ಇವುಗಳ ನಡುವೆ ಬೇರೆ ಬೇರೆ ಆಯಾನುಗಳು ಬೆರೆತಿರುತ್ತವೆ. ಹರಳುಗಳ ನಡುವೆ ಇರುವ ಅಂಟುಜನಕ ತಂತುಗಳು ಬಿಗುವು ನೀಡುವ ನಾರುಗಳಿಂತಿರುತ್ತವೆ. 
ಮೂಳೆ ಬೆಳೆವ ಬಗೆ : ಪಿಂಡಗೂಸಿನಲ್ಲಿ (ಫೀಟಸ್) ಮೂಳೆ ಅಂಕುರಿಸುತ್ತದೆ, ಬೆಳೆಯುತ್ತದೆ, ಜನನದ ನಂತರ ಹದಿವಯಸ್ಸಿನವರೆಗೆ ಮೂಳೆ ಬೆಳೆಯುತ್ತದೆ. ಮೆಲ್ಲೆಲುಬಿನ (ಕಾರ್ಟಿಲೇಜ) ಇಲ್ಲವೆ ತಂತುಕ (ಪೈಬ್ರಸ್) ಹಾಸಿಗೆಯ ಮೇಲೆ ಎಲುಬು ಅಂಕುರಿಸಿ ಬೆಳೆಯುತ್ತದೆ. ಮೆಲ್ಲೆಲುಬಿನ ಮೇಲೆ ಮೂಳೆ ರಚನೆಗೊಂಡರೆ ಅದಕ್ಕೆ ಮೆಲ್ಲೆಲುಬೊಳಗಿನ ಎಲು ಮೊಳೆತ (ಕಾರ್ಟಿಲೇಜಿನಿಯಸ್ ಆಸಿಫಿಕೇಶನ್) ಎನ್ನುತ್ತಾರೆ; ತಂತುಗಳ ಮೇಲೆ ನೇರವಾಗಿ ಎಲುಬು ಮೊಳೆತರೆ ಅದಕ್ಕೆ ಪದರದೊಳಗಿನ ಎಲು ಮೊಳೆತ (ಫೈಬ್ರಸ್ ಆಸಿಫಿಕೇಶನ) ಎನ್ನುತ್ತಾರೆ. ಮಗುವಿನ ಮೂಳೆಗಳ ಬೆಳವಣಿಗೆಗಳಲ್ಲಿ ಮತ್ತು ಮುರಿತದೆಲುಬು ಮತ್ತೇ ಕೂಡಿಕೊಳ್ಳುವ ಕ್ರಿಯೆಯಲ್ಲಿ ಈ ಎರಡೂತರಹದ ಎಲುಮೊಳೆತ ಕಾಣಿಸುತ್ತದೆ. ಎಲುಬಿನ ಒಂದು ತುದಿಯ ಒಳ ಭಾಗದಲ್ಲಿ ಬೆಳೆವ ತಟ್ಟೆ ಇರುತ್ತದೆ. ಇದಕ್ಕೆ ಮೇಲೆಲು ಮೊಳೆವ ತಟ್ಟೆ (ಎಪಿಫೈüಸಿಯಲ್ ಗ್ರೊವೆಥ್ ಪ್ಲೇಟ್) ಎನ್ನುತ್ತಾರೆ. ಈ ತಟ್ಟೆ ಎಲುಬೊಂದರ ತುದಿಯ ಮೆಲ್ಲಲು (ಎಪಿಫೈಸಿಸ) ಮತ್ತು ಕಾವು/ದಿಂಡು (ಶ್ಯಾಪ್ಟ್)ಗಳ ಮಧ್ಯದಲ್ಲಿದೆ. ಎಲುಬು ತುದಿಯಲ್ಲಿ ಬೆಳೆಯುತ್ತ ಉದ್ದವಾಗುತ್ತದೆ. ಎಲುಸುತ್ಪರೆಯ ಒಳ ಮೈಯಿಂದ ಹಾಗೂ ಮೂಳೆಯೊಳ ಪರೆಯಿಂದ ಎಲುಬು ಗಾತ್ರದಲ್ಲಿ ಬೆಳೆಯುತ್ತದೆ. ಸಾಮಾನ್ಯವಾಗಿ ಬೆಳೆಯುವುದು 16-18 ರ ವಯಸ್ಸಿಗೆ ಸೀಮಿತ ಗೊಂಡಿರುತ್ತದೆ. ಎಲುಬು ಬೆಳೆವುದು ಸ್ಥಗಿತಗೊಳ್ಳುತ್ತಿದ್ದಂತೆ ಬೆಳೆವತಟ್ಟೆ ಮಾಯವಾಗುತ್ತದೆ. ಎಲುಬು ಕರಗುವ, ಬೆಳೆವ ಕ್ರಿಯೆ, ಜೀವನ ಪರ್ಯಂತ ಎಲುಸುತ್ಪರೆ ಮತ್ತು ಮೂಳೆಯೊಳ ಪೊರೆಯಿಂದ ನಿರಂತರವಾಗಿ ನಡೆಯುತ್ತದೆ.
 
ಎಲುಬುಗಳ ಕಾರ್ಯ : ದೇಹ ದೊಳಗಿನ ಕಾಲ್ಸಿಯಂನ 60 ಪ್ರತಿಶತ ಮೂಳೆಗಳಲ್ಲಿದೆ. ಉಳಿದದ್ದು ರಕ್ತ ರಸ (ಪ್ಲಾಸ್ಮಾ) ದಲ್ಲಿ ಹಾಗೂ ಇತರ ಕಣಗಳಲ್ಲಿ. ಹೃದಯ, ನರ, ಸ್ನಾಯುಗಳು ಸರಿಯಾಗಿ ತಮ್ಮ ತಮ್ಮ ಕೆಲಸ ನಿರ್ವಹಿಸಲು, ರಕ್ತ ಗರಣೆಕಟ್ಟಲು ಕಾಲ್ಸಿಯಂನ ಅವಶ್ಯಕತೆ ಇದೆ. ರಕ್ತ ರಸದಲ್ಲಿ ಇದರ ಸಾಂದ್ರತೆ ಒಂದೇ ಸಮನಾಗಿ ಉಳಿಯುವುದು ಅತ್ಯಾವಶ್ಯಕ. ಎಲುಬೊಳಗಿನ ಲವಣ ಸುಲಭವಾಗಿ ಕರಗುವುದಿಲ್ಲ. ಎಲುಬೊಳಗಣ ಕಾಲ್ಸಿಯಂ ಮತ್ತು ಫಾಸ್ಫರಸ್ ಮಟ್ಟ ಒಂದೇ ಸಮನಾಗಿರುವುದು ಸಹ ಅತೀ ಮುಖ್ಯವಾದದ್ದೆ. ಈ ಒಂದು ಸಮಾನತೆಯನ್ನು ಗುರಾಣಿಕ(ತೈರಾಯ್ಡ್) ಗ್ರಂಥಿಯ ಹಿಂಬದಿಯಲ್ಲಿ ಅಡಗಿ ಕುಳಿತಂತಿರುವ ನಾಲ್ಕು ಪುಟಾಣಿ ಗಾತ್ರದ ಬದಿಗುರಾಣಿಕ (ಪ್ಯಾರಾ ತೈರಾಯ್ಡ್) ಗ್ರಂಥಿಗಳು ನಿಯಂತ್ರಿಸುತ್ತವೆ.
	
ಜೀವನದುದ್ದಕ್ಕೂ ನಡೆಯುವ ಹ್ಯಾವರ್ಸಿಯನ್ ಮಂಡಲಗಳ ಮರುರೂಪಿಕೆಗೂ, ರಕ್ತ-ಮೂಳೆಗಳ ನಡುವೆ ನಡೆಯುವ ಸುಣ್ಣಾಂಶದ ವಿನಿಮಯದ ಹತೋಟಿಗೂ ನಿಕಟ ಸಂಬಂಧವಿದೆ. ಮೂಳೆ ಬೆಳೆಯುತ್ತಿರುವ ಸಮಯದಲ್ಲಿ ರಕ್ತದಿಂದ ಖನಿಜಾಂಶಗಳನ್ನು ಪಡೆಯುತ್ತದೆ. ರಕ್ತದೊಳಗೆ ಖನಿಜಾಂಶಗಳ ಪ್ರಮಾಣ ಕಡಿಮೆ ಬೀಳದಂತೆ ತನ್ನೊಳಗಿನದನ್ನು ನೀಡುತ್ತದೆ. ಬಹುಕಾಲದವರೆಗೆ ರಕ್ತರಸದ ಖನಿಜಾಂಶಗಳ ಪ್ರಮಾಣದಲ್ಲಿ ಇಳಿತ ಉಂಟಾದರೆ ಎಲುಬು ತನ್ನೊಳಗಿನ ಖನಿಜಾಂಶಗಳನ್ನು ಕಳಕೊಂಡು ಮೆತ್ತಗಾಗುವ ಸಂಭವವಿರುತ್ತದೆ. ಇಂತಹದ್ದು ಮಕ್ಕಳಲ್ಲಿ ಕಂಡರೆ ರಿಕೆಟ್ಸ್ ಎನ್ನುತ್ತಾರೆ ದೊಡ್ಡವರಲ್ಲಾದರೆ ಆಸ್ಪಿಯೋ ಮಲೇಶಿಯಾ ಎನ್ನುತ್ತಾರೆ. ವಯಸ್ಸಾದಂತೆ, ಮಹಿಳೆಯರಲ್ಲಿ ಮುಟ್ಟು ಸ್ಥಗಿತಗೊಂಡಾದ ಮೇಲೆ, ಆಹಾರದಲ್ಲಿಯ ಪೌಷ್ಠಿಕಾಂಶದ ಕೊರತೆಯಾದರೆ, ಮದ್ಯ ಸೇವನೆ ಮಿತಿ ಮೀರಿದರೆ, ಸ್ಟಿರಾಯ್ಡ ಔಷದ ಸೇವನೆ ನಿರಂತರವಾಗಿ ಸಾಗಿದರೆ. ಎಲುಬಿನೊಳಗಣ ಅಂಟುತಂತುಗಳ ಸೊರಗುವಿಕೆ ಫಲಿಸುತ್ತದೆ. ಇದಕ್ಕೆ ಪೊಳ್ಳೆಲು (ಆಸ್ಪ್ಪಿಯೋಫೋರೋಸಿಸ್) ಎನ್ನುತ್ತಾರೆ. 
ವಿಕಿರಣ ಶಕ್ತ ಧಾತುಗಳು : ರೇಡಿಯಂ, ಸ್ಪ್ರಾಂಷಿಯಂ ತೆರನ ವಿಕಿರಣ ಶಕ್ತಧಾತುಗಳು (ರೆಡಿಯೋ ಅಕ್ಟಿವ ಎಲಿಮೆಂಟ್ಸ್)ಯಾವುದೇ ಕಾರಣಕ್ಕೆ (ಚಿಕಿತ್ಸೆಗಾಗಿ ಬಳಸಿದರೂ) ಶರೀರದ ಒಳ ಸೇರಿದರೆ ಅವು ಹೆಚ್ಚಾಗಿ ಎಲುಬುಗಳಲ್ಲಿ ನೆಲೆಸುತ್ತವೆ. ಅನೇಕ ವರ್ಷಗಳ ವರೆಗೆ ಅವು ಅಲ್ಲೇ ಬೀಡು ಬಿಟ್ಟರೆ ಮೂಳೆಗೂ, ಮೂಳೆಯೊಳಗಿನ ಮಜ್ಜೆಗೂ ಹಾನಿಕಾರಕವಾಗುತ್ತವೆ. ಎಲುಬಿನೊಳಗೆ ರೇಡಿಯಂ ಬಹುಕಾಲ ಉಳಿದರೆ ಅದರಿಂದ ಉತ್ಪತ್ತಿಯಾಗುವ ವಿಕಿರಣತೆ ಮೂಳೆಯ ಮಾಂಸಗಂತಿ (ಸಾರ್ಕೋಮಾ)ಯನ್ನುಂಟು ಮಾಡಬಹುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ